ಬಂಟ್ವಾಳ
	ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕ ಆಡಳಿತ ಕೇಂದ್ರ. ಮಂಗಳೂರಿನ ಪೂರ್ವದಲ್ಲಿರುವ ಈ ತಾಲ್ಲೂಕನ್ನು ಉತ್ತರದಲ್ಲಿ ಕಾರ್ಕಳ, ದಕ್ಷಿಣದಲ್ಲಿ ಕೇರಳ ರಾಜ್ಯ, ಪೂರ್ವ ಮತ್ತು ಈಶಾನ್ಯದಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ, ಪಶ್ಚಿಮದಲ್ಲಿ ಮಂಗಳೂರು ತಾಲ್ಲೂಕುಗಳು ಸುತ್ತುವರಿದಿವೆ. ಬಂಟ್ವಾಳ, ಪಾಣಿಮಂಗಳೂರು ಮತ್ತು ವಿಟ್ಲಹೋಬಳಿಗಳು. 84 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 715 ಚ. ಕಿಮೀ. ಜನಸಂಖ್ಯೆ 3,61,210 (2001).

	ಬಂಟ್ವಾಳ ತಾಲ್ಲೂಕು ಅಲ್ಲಲ್ಲಿ ಹರಡಿರುವ ಸಣ್ಣ ಬೆಟ್ಟಗುಡ್ಡಗಳಿಂದಲೂ ವಿಶಾಲ ಮಟ್ಟಸ ಪ್ರದೇಶಗಳಿಂದಲೂ ಕೂಡಿದೆ. ತಾಲ್ಲೂಕಿನ ಮುಖ್ಯನದಿ ನೇತ್ರಾವತಿ. ಇದು ತಾಲ್ಲೂಕಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಮಂಗಳೂರು ಬಳಿ ಅರಬ್ಬಿ ಸಮುದ್ರ ಸೇರುವುದು. ಬಂಟ್ವಾಳದಿಂದ ಮಂಗಳೂರಿನವರೆಗೆ ಈ ನದಿ ಜಲಮಾರ್ಗವಾಗಿದೆ. ಸರಾಸರಿ ಮಳೆ 3772,8 ಮಿ.ಮಿ. (1981). ನೇತ್ರಾವತಿ ನದಿಗೆ ಈ ತಾಲ್ಲೂಕಿನ ಹಂಚಿಕಟ್ಟೆ ಮತ್ತು ಬಂಟ್ವಾಳಗಳಲ್ಲಿ ಕಟ್ಟೆ ಕಟ್ಟುವ ಯೋಜನೆ ಇದೆ. ತಾಲ್ಲೂಕಿನ ಒಟ್ಟು 71,758 ಹೆಕ್ಟೇರ್ ಭೂಮಿಯಲ್ಲಿ 6,103 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು 23,528 ಹೆಕ್ಟೇರುಗಳಲ್ಲಿ ಬೆಳೆ ತೆಗೆಯಲಾಗುತ್ತಿದೆ. 1,915 ಹೆಕ್ಟೇರ್ ಹುಲ್ಲುಗಾವಲಿದೆ (1971-72). ಬತ್ತ, ಅಡಿಕೆ, ತೆಂಗು ಮತ್ತು ಗೋಡಂಬಿ ಈ ತಾಲ್ಲೂಕಿನ ಪ್ರಮುಖ ಬೆಳೆಗಳು. ರಾಗಿ, ಕೆಲವು ದ್ವಿದಳ ಧಾನ್ಯಗಳು, ಮೆಣಸು, ಮೆಣಸಿನಕಾಯಿ, ಶುಂಠಿ, ತರಕಾರಿಗಳನ್ನೂ ಮಿಶ್ರ ಬೆಳೆಯಾಗಿ ಕೋಕೋವನ್ನು ಬೆಳೆಯಲಾಗುತ್ತಿದೆ. ಹಲಸು, ಪಪಾಯಿ, ಬಾಳೆ ಮಾವು ಮುಂತಾದ ಫಲಗಳುಂಟು.

	ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಕೈಗಾರಿಕೆ. ಹಂಚು, ಇಟ್ಟಿಗೆ ಮತ್ತು ಮಡಕೆ ಕುಡಿಕೆಗಳ ತಯಾರಿಕೆ, ಜೇನು ಸಾಕಣೆ, ಪಶುಪಾಲನೆ ಮುಂತಾದವುಗಳಿವೆ. ಈ ತಾಲ್ಲೂಕಿನಲ್ಲಿ ವಿದ್ಯುತ್ ಅಂಚೆ ತಂತಿ ಸೌಲಭ್ಯಗಳೂ ಶಾಲಾ ಕಾಲೇಜುಗಳೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯಕೇಂದ್ರಗಳೂ ಇವೆ.

	ಈ ತಾಲ್ಲೂಕಿನ ಬಂಟ್ವಾಳ ಹೋಬಳಿಯಲ್ಲಿ ಕೊಡ್ಯಮಲೆ, ವಿಟ್ಲ ಹೋಬಳಿಯಲ್ಲಿ ಸುಲ್ಲಮಲೆ, ಬಲ್ಲ ಮಲೆ ಮತ್ತು ಕಳಂಜಿ ಮಲೆ ಮುಂತಾದ ಕಾದಿಟ್ಟ ಅರಣ್ಯ ಪ್ರದೇಶಗಳಿವೆ. ವಿಟ್ಲದಲ್ಲಿ ಕೇಂದ್ರ ಅಡಿಕೆ ಬೆಳೆಯ ಸಂಶೋಧನಾ ಸಂಸ್ಥೆಯಿದೆ. ಈ ತಾಲ್ಲೂಕಿನ ಆಲಿಕೆ ಗ್ರಾಮ ಲೋಕಸೇವಾ ವೃಂದದ ರಚನಾತ್ಮಕ ಕಾರ್ಯ ಚಟುವಟಿಕೆಗಳಿಗೆ ಪ್ರಸಿದ್ಧ. ಕರಂಜೆ ಗ್ರಾಮದಲ್ಲಿ ಪುರಾತನ ಶಿವಾಲಯವಿದೆ. ಬಂಟ್ವಾಳದ ದಕ್ಷಿಣಕ್ಕೆ 6 ಕಿಮೀ ದೂರದಲ್ಲಿ ಪಾಣಿ ಮಂಗಳೂರು ನೇತ್ರಾವತಿ ನದಿ ದಡದಲ್ಲಿದೆ. ಈ ಊರಿಗೆ ಸೇತುವೆ ಕಟ್ಟಿ ಬಂಟ್ವಾಳದೊಡನೆ ಸಂಪರ್ಕ ಕಲ್ಪಿಸಿದೆ. ಇದೊಂದು ವ್ಯಾಪಾರ ಕೇಂದ್ರ ವಿಟ್ಲದಲ್ಲಿ ನಾಲ್ಕು ದೇವಾಲಯಗಳೂ ಹಿಂದಿನ ಹೆಗ್ಗಡೆಯ ಅರಮನೆ ಅವಶೇಷಗಳು ಇವೆ.

	ನೇತ್ರಾವತಿ ನದಿಯ ಉತ್ತರ ದಂಡೆಯ ಮೇಲೆ ಮಂಗಳೂರಿನ ಪೂರ್ವಕ್ಕೆ ಸುಮಾರು 25 ಕಿಮೀ ದೂರದಲ್ಲಿರುವ ಬಂಟ್ವಾಳ ತಾಲ್ಲೂಕಿನ ಆಡಳಿತ ಕೇಂದ್ರ. ಜನಸಂಖ್ಯೆ 36,829 (2001). ಸುತ್ತಲ ಮಂಗಳೂರು, ಪುತ್ತೂರು, ಕೇರಳದ ಮಂಜೇಶ್ವರ, ಕಾಸರಗೋಡು ಮುಂತಾದ ಕಡೆಗೆ ಇಲ್ಲಿಂದ ಸಂಪರ್ಕ ಸೌಲಭ್ಯಗಳಿವೆ. ಹಾಸನ-ಮಂಗಳೂರು ರೈಲು ಮಾರ್ಗದ ಒಂದು ಮುಖ್ಯ ನಿಲ್ದಾಣ ಬಂಟ್ವಾಳ. ವ್ಯಾಪಾರ ಕೇಂದ್ರ. ನೇತ್ರಾವತಿ ನದಿ ಮೂಲಕ ಮಂಗಳೂರು ಬಂದರಿಗೆ ಇಲ್ಲಿಂದ ಸರಕು ಸಾಗಣೆಯುಂಟು. ವಿದ್ಯುತ್, ಅಂಚೆ, ತಂತಿ, ಸರ್ಕಾರಿ ಆಸ್ಪತ್ರೆ, ಶಾಲಾಕಾಲೇಜುಗಳ ಸೌಲಭ್ಯಗಳಿದ್ದು ಈ ಊರು ಪುರಸಭಾಡಳಿತಕ್ಕೆ ಸೇರಿದೆ.

	ಬಂಟ್ವಾಳ ಟಿಪ್ಪುವಿನ ಧಾಳಿಗೆ ತುತ್ತಾಗಿದ್ದು ಊರಿನ ಕೆಲವು ಭಾಗ ಹಾಳಾಗಿತ್ತು. ನೇತ್ರಾವತಿ ನದಿ ಪ್ರವಾಹ ಬಂದಾಗ ಊರನ್ನು ಮುಟ್ಟುವುದುಂಟು. ಊರಬಳಿ ನರಹರಿ ಪರ್ವತವಿದ್ದು ಅದರ ಮೇಲೊಂದು ದೇವಾಲಯವಿದೆ.
(ಎಚ್.ಎಸ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ